ನವಜೀವನ
	ಗುಜರಾತಿ ಮತ್ತು ಹಿಂದಿಯಲ್ಲಿ ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು. ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಹಿಂದಿರುಗಿದ ಮಹಾತ್ಮ ಗಾಂಧಿಯವರು ಇಲ್ಲಿ ತಮ್ಮ ಕಾರ್ಯ ಹಾಗೂ ತತ್ತ್ವಗಳ ಪ್ರಚಾರಕ್ಕಾಗಿ ನಡೆಸುತ್ತಿದ್ದ ಎರಡು ಪತ್ರಿಕೆಗಳಲ್ಲಿ ನವಜೀವನವೂ ಒಂದು. 1919ರಲ್ಲಿ ಮುಂಬಯಿಯಿಂದ ಜಮುನಾದಾಸ್ ದ್ವಾರಕಾದಾಸರ ಸಂಪಾದಕತ್ವದಲ್ಲಿ ಆರಂಭಿಸಲಾದ ಯಂಗ್ ಇಂಡಿಯ ಎಂಬ ಇಂಗ್ಲಿಷ್ ವಾರಪತ್ರಿಕೆಯ ಜೊತೆಗೆ ಅಹಮದಾಬಾದಿನಿಂದ ನವಜೀವನ ಆಣೆ ಸತ್ಯ ಎಂಬ ಗುಜರಾತಿ ಮಾಸಿಕವನ್ನು ಇಂದುಲಾಲ್ ಯಾಜ್ಞಿಕ್ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲಾಗುತ್ತಿತ್ತು. ಈ ಪತ್ರಿಕೆಗಳ ವ್ಯವಸ್ಥಾಪಕ ಮಂಡಲಿಯ ಕೋರಿಕೆಯಂತೆ ಮಹಾತ್ಮ ಗಾಂಧಿಯವರು ಈ ಎರಡೂ ಪತ್ರಿಕೆಗಳನ್ನು ನಡೆಸುವ ಹೊಣೆಗಾರಿಕೆ ವಹಿಸಿಕೊಂಡರು. ಬೇರೆ ಬೇರೆ ನಗರಗಳಿಂದ ಒಂದೊಂದು ಪತ್ರಿಕೆಯನ್ನು ಹೊರಡಿಸುವ ಶ್ರಮವನ್ನು ಅನುಭವದಿಂದ ಅರಿತ ಗಾಂಧೀಜಿಯವರು ಇವೆರಡೂ ಪತ್ರಿಕೆಗಳನ್ನು ತಮ್ಮ ಸಂಪಾದಕತ್ವದಲ್ಲಿ ಅಹಮದಾಬಾದಿನಿಂದ ಪ್ರಕಟಿಸಲು ನಿರ್ಧರಿಸಿದರು (1919). ನವಜೀವನ ವಾರಪತ್ರಿಕೆಯಾಯಿತು.

	ಮಹಾತ್ಮ ಗಾಂಧಿಯವರು ನವಜೀವನದ ಸಂಪಾದಕತ್ವವನ್ನು ವಹಿಸಿಕೊಂಡ ಮೇಲೆ ಇದರ ಪ್ರಸಾರ ಒಂದೇ ವರ್ಷದಲ್ಲಿ 30,000ಕ್ಕೆ ಏರಿತು. ನವಜೀವನ ಮುದ್ರಣಾಲಯಕ್ಕೆ ಇನ್ನೂ ಹೆಚ್ಚು ಪ್ರತಿಗಳನ್ನು ಮುದ್ರಿಸಲು ಸಾಧ್ಯವಿರಲಿಲ್ಲ.

	ಈ ಪತ್ರಿಕೆಗಳು ಚಂದಾದಾರರ ಪ್ರೋತ್ಸಾಹವನ್ನೇ ಅವಲಂಬಿಸಿದ್ದುವು. ಜಾಹೀರಾತುಗಳನ್ನು ಸ್ವೀಕರಿಸುತ್ತಿರಲಿಲ್ಲ.

	ಮಹಾತ್ಮರ ನೇತೃತ್ವದಲ್ಲಿ ನಡೆಯುತ್ತಿದ್ದ ಈ ಪತ್ರಿಕೆಯಲ್ಲಿ ಜಲಿಯನ್‍ವಾಲಾಬಾಗ್ ಮಹಾದುರಂತ, ಅಹಿಂಸೆ, ಅಸಹಕಾರ, ಸ್ವದೇಶಿ, ಸತ್ಯಾಗ್ರಹ, ಭಾರತದ ಸ್ವಾತಂತ್ರ್ಯದ ಗಳಿಕೆ-ಇವುಗಳನ್ನು ಕುರಿತು ಸ್ವತಃ ಗಾಂಧೀಜಿಯವರೇ ಬರೆಯುತ್ತಿದ್ದರು. ಈ ಲೇಖನಗಳು ನಿರ್ಭಯ ಟೀಕೆಗಳಾಗಿದ್ದುವು. ಇವುಗಳದು ವಿಚಾರಪೂರಿತ ಸುಲಭ ಸರಳ ಶೈಲಿ. ಈ ಲೇಖನಗಳನ್ನು ಯಾರು ಬೇಕಾದರೂ ಉದ್ಧರಿಸಬಹುದಿತ್ತು, ಪ್ರಕಟಿಸಬಹುದಿತ್ತು. ದೇಶವಿದೇಶಗಳ ಪತ್ರಿಕೆಗಳು ಇವನ್ನು ಧಾರಾಳವಾಗಿ ಉದ್ಧರಿಸುತ್ತಿದ್ದುವು.

	ಇವುಗಳಲ್ಲಿ ಬರುತ್ತಿದ್ದ ನಿರ್ಭಯ ಟೀಕೆಗಳ ಪರಿಣಾಮವಾಗಿ ಸಂಪಾದಕ ಗಾಂಧೀಜಿಯವರೂ ಮುದ್ರಕ ಶಂಕರ್‍ಲಾಲ್ ಬ್ಯಾಂಕರರೂ 1922ರ ಮಾರ್ಚ್ 10ರಂದು ಬಂಧಿತರಾದರು. ಗಾಂಧೀಜಿಯವರು ಆರು ವರ್ಷ, ಬ್ಯಾಂಕರ್ ಅವರು ಎರಡು ವರ್ಷ ಸಶ್ರಮ ಶಿಕ್ಷೆಗೆ ಒಳಗಾದರು. ಅನಾರೋಗ್ಯದ ಕಾರಣದಿಂದ ಗಾಂಧೀಜಿಯವರನ್ನು ಸರ್ಕಾರ 1924ರ ಫೆಬ್ರವರಿ 7ರಂದು ಬಿಡುಗಡೆ ಮಾಡಿತು. ಇದಕ್ಕೆ ಮೊದಲು ಜಮನಾಲಾಲ್ ಬಜಾಜರ ಸಲಹೆಯಂತೆ ನವಜೀವನ ಹಿಂದೀ ವಾರಪತ್ರಿಕೆ ಪ್ರಕಟಣೆ ಪ್ರಾರಂಭವಾಗಿತ್ತು. ಗಾಂಧೀಜಿ ಬಂಧನದಲ್ಲಿದ್ದಾಗ ಸ್ವಾಹಿಬ್ ಕುರೇಷಿ, ಸಿ.ರಾಜಗೋಪಾಲಾಚಾರಿ, ಜಾರ್ಜ್ ಜೋಸೆಫ್ ಇವರು ಅನುಕ್ರಮವಾಗಿ ಸಂಪಾದಕರಾಗಿಯೂ ಜೆ.ಪಿ. ಭನ್ಸಾಲಿ, ವಿ.ಜಿ. ದೇಸಾಯಿ, ರಾಮದಾಸ್ ಇವರು ಮುದ್ರಕರಾಗಿಯೂ ಸ್ವಾಮಿ ಆನಂದಾನಂದರು ವ್ಯವಸ್ಥಾಪಕರಾಗಿಯೂ ಈ ಪತ್ರಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇವರೆಲ್ಲರೂ ತುರಂಗವಾಸ ಅನುಭವಿಸಿದರು. ಗಾಂಧೀಜಿ ಬಂಧನದಲ್ಲಿದ್ದಾಗ ನವಜೀವನದ ಚಂದಾದಾರರ ಸಂಖ್ಯೆ 40,000 ದಿಂದ 8,000ಕ್ಕೆ ಇಳಿಯಿತು.

	ಬಂಧಮುಕ್ತ ಗಾಂಧಿಯವರು 1924ರ ಜುಲೈಯಲ್ಲಿ ಯಂಗ್ ಇಂಡಿಯ ಮತ್ತು ನವಜೀವನ ಪತ್ರಿಕೆಗಳ ಸಂಪಾದಕತ್ವವನ್ನು ವಹಿಸಿಕೊಂಡರು. ಗುಜರಾತಿ ನವಜೀವನದ ಪ್ರಸಾರ ಸಂಖ್ಯೆ 50,000ಕ್ಕೆ ಏರಿತು. ರೂ. 50,000 ಲಾಭ ಬಂತು. ಈ ಹಣವನ್ನು ಖಾದಿ ಪ್ರಚಾರಕ್ಕಾಗಿ ಕೊಡಲಾಯಿತು. ಹಿಂದೀ ನವಜೀವನದಿಂದ ಮುಂದೆ ಗಳಿಸಿದ ಲಾಭವನ್ನು ಹಿಂದೀ ಪ್ರಚಾರಕ್ಕಾಗಿ ವಿನಿಯೋಗಿಸಲಾಯಿತು.

	1930ರಲ್ಲಿ ಗಾಂಧೀಜಿ ಚರಿತ್ರಾರ್ಹ ದಾಂಡೀ ಚೈತ್ರಯಾತ್ರೆ ಕೈಗೊಂಡರು. ನವಜೀವನ ಮುದ್ರಣಾಲಯದ ಮುಟ್ಟುಗೋಲಾಯಿತು. ಮೂರೂ ಪತ್ರಿಕೆಗಳ ಪ್ರಕಟಣೆ ನಿಂತಿತು. ಮತ್ತೆ 1931ರ ಮಾರ್ಚ್ 12ರಂದು ಈ ಪತ್ರಿಕೆಗಳು ಹೊರಬಿದ್ದುವು. ದುಂಡು ಮೇಜಿನ ಪರಿಷತ್ತಿಗೆ ಲಂಡನ್ನಿಗೆ ಹೋಗಿದ್ದ ಗಾಂಧಿಯವರು 1932ರಲ್ಲಿ ಮರಳಿದರು. ಜನವರಿಯಲ್ಲಿ ಬಂಧಿತರಾದರು. 1932ರ ಜನವರಿ 14ರ ಪತ್ರಿಕೆಗಳೇ ಅವರ ಮಾರ್ಗದರ್ಶನದಲ್ಲಿ ಹೊರಟ ಕಡೆಯ ಸಂಚಿಕೆಗಳಾದವು.

	ಕನ್ನಡದಲ್ಲೂ ಈ ಹೆಸರಿನ ಪತ್ರಿಕೆಯೊಂದು ಪ್ರಕಟವಾಗುತ್ತಿತ್ತು.			
	(ಪಿ.ಎಸ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ